ನಟ ದರ್ಶನ್ ತೂಗುದೀಪ ಅವರಿಗೆ ಜಾಮೀನು ಸಿಗುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ. ಒಂದ್ಕಡೆ, ಕೋರ್ಟ್‌ನಲ್ಲಿ ಹಿನ್ನಡೆ, ಇನ್ನೊಂದ್ಕಡೆ ಆರೋಗ್ಯ ಸಮಸ್ಯೆಗಳ ನಡುವೆ ದರ್ಶನ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದರೆ, ಇತ್ತ ಹೊರಗೆ ಅವರ ಅಭಿಮಾನಿಗಳು ನೆಚ್ಚಿನ ನಟನ ರಕ್ಷಣೆಗೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೊರೆ ಹೋಗಿದ್ದಾರೆ.

ಹೈಲೈಟ್ಸ್‌:

  • ರಾಷ್ಟ್ರಪತಿಗೆ ದರ್ಶನ್ ಅಭಿಮಾನಿಗಳ ಪತ್ರ!
  • ʻಡಿ ಬಾಸ್ʼ ಬಿಡುಗಡೆಗೆ ಕನ್ನಡಿಗರ ಭಾವನಾತ್ಮಕ ಮನವಿ!
  • ಸಹಾಯ ಕೋರಿ ಮುರ್ಮು ಅವರ ಮೊರೆ ಹೋದ ʻಡಿ ಬಾಸ್‌ʼ ಅಭಿಮಾನಿಗಳು
darshan
(ಗ್ಯಾಲರಿ– Vijaya Karnataka Web)
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವದರ್ಶನ್ ತೂಗುದೀಪ ಅವರ ಸಂಕಷ್ಟಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಕೋರ್ಟ್‌ನಲ್ಲಿ ಜಾಮೀನು ಪಡೆಯಲು ಪಟ್ಟ ಶ್ರಮವೆಲ್ಲವೂ ನಿರರ್ಥಕವಾಗಿದ್ದು, ಕಾನೂನಿನ ಸಂಕೋಲೆಯಲ್ಲೇ ನಟ ದರ್ಶನ್ ಬಂಧಿಯಾಗಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಪ್ರದೋಶ್ ʻಮಾಫಿ ಸಾಕ್ಷಿʼಯಾಗಲು ಮುಂದಾಗಿರುವುದು ದರ್ಶನ್‌ಗೆ ಮತ್ತಷ್ಟು ದೊಡ್ಡ ಹಿನ್ನಡೆಯನ್ನುಂಟುಮಾಡಿದೆ. ಈ ಎಲ್ಲಾ ಕಾನೂನು ಹೋರಾಟಗಳು ಮತ್ತು ಹಿನ್ನಡೆಗಳ ನಡುವೆ, ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನ ರಕ್ಷಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೊರೆ ಹೋಗಿದ್ದಾರೆ.

ಸೋಶಿಯಲ್‌ ಮೀಡಿಯಾಗಳಲ್ಲಿ ಪ್ರಸ್ತುತ ವ್ಯಾಪಕವಾಗಿ ವೈರಲ್ ಆಗುತ್ತಿರುವ ಈ ಪತ್ರವನ್ನ ‘ಡಿ ಬಾಸ್ ಅಭಿಮಾನಿಗಳು, ಕರ್ನಾಟಕ’ ಎಂಬ ಹೆಸರಿನಲ್ಲಿ ಕನ್ನಡದಲ್ಲೇ ಬರೆಯಲಾಗಿದೆ. ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ರಾಷ್ಟ್ರಪತಿಗಳನ್ನ ತಾಯಿಯ ಸ್ಥಾನದಲ್ಲಿಟ್ಟು ಕಂಡು, ದರ್ಶನ್ ವಿಷಯದಲ್ಲಿ ಮಾನವೀಯ ದೃಷ್ಟಿಯಿಂದ ಮಧ್ಯಪ್ರವೇಶಿಸುವಂತೆ ಅಭಿಮಾನಿಗಳು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ.

ದರ್ಶನ್‌ ಇಕ್ಕಟ್ಟಿನಲ್ಲಿದ್ದಾರೆ, ಸುದೀಪ್‌ ಯುದ್ಧದ ಮಾತನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ಹಿ.ನಟ ಮುಖ್ಯಮಂತ್ರಿ ಚಂದ್ರು ಕೊಟ್ಟ ಸಲಹೆಯೇನು?

ಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನ ಉದ್ದೇಶಿಸಿ, “ನೀವು ಬಡವರ, ಆದಿವಾಸಿಗಳ ಮತ್ತು ನೊಂದವರ ಪರವಾಗಿ ನಿಲ್ಲುವ ಕರುಣಾಮಯಿ ತಾಯಿ. ನಮಗೆ ಭಾರತೀಯ ಕಾನೂನು ವ್ಯವಸ್ಥೆ ಮತ್ತು ನ್ಯಾಯಾಲಯಗಳ ಮೇಲೆ ನಂಬಿಕೆ ಹಾಗೂ ಗೌರವವಿದೆ. ಆದರೆ, ನಮ್ಮ ಕರ್ನಾಟಕದ ಹೆಮ್ಮೆಯ ನಟ ಡಿ ಬಾಸ್‌ ದರ್ಶನ್ ಸರ್ ಪ್ರಸ್ತುತ ತೀವ್ರ ಸಂಕಷ್ಟದಲ್ಲಿದ್ದಾರೆ. ಅವರು ಕನ್ನಡಿಗರಿಗೆ ದೇವರ ಸಮಾನ” ಎಂದು ಬರೆಯಲಾಗಿದೆ.

“ಒಬ್ಬ ತಾಯಿಯಾಗಿ ನಮ್ಮ ದರ್ಶನ್ ಅವರ ಪ್ರಕರಣವನ್ನ ಮಾನವೀಯತೆಯ ಆಧಾರದ ಮೇಲೆ ನೋಡಿ. ಕಾನೂನಿನ ಪ್ರಕಾರ ನ್ಯಾಯ ಸಿಗಲಿ, ಆದರೆ ಅವರಿಗೆ ಆದಷ್ಟು ಬೇಗ ನ್ಯಾಯ ದೊರೆಯುವಂತೆ ನಿಮ್ಮ ಹಂತದಲ್ಲಿ ಸಾಧ್ಯವಾದ ಸಹಾಯವನ್ನ ಮಾಡಿ..” ಎಂದು ಅಭಿಮಾನಿಗಳು ಕೈಮುಗಿದು ವಿನಂತಿಸಿದ್ದಾರೆ.

ದರ್ಶನ್ ಜೈಲಿನಲ್ಲಿದ್ದ ಅವಧಿಯಲ್ಲಿ ತೀವ್ರ ಬೆನ್ನುಮೂಳೆ ನೋವಿನಿಂದ ಬಳಲುತ್ತಿದ್ದು, ಅವರಿಗೆ ತುರ್ತು ಮತ್ತು ಸೂಕ್ತ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಫ್ಯಾನ್ಸ್‌ ಪ್ರತಿಪಾದಿಸುತ್ತಿದ್ದಾರೆ. ನ್ಯಾಯಾಲಯದಲ್ಲಿ ಪದೇಪದೇ ಹಿನ್ನಡೆಯಾಗುತ್ತಿರುವ ಕಾರಣ, ಸೋಶಿಯಲ್‌ ಮೀಡಿಯಾಗಳಲ್ಲಿ ಈ ಪತ್ರ ಮತ್ತು ವಿಶೇಷ ಪೋಸ್ಟರ್‌ಗಳನ್ನ ಹಂಚಿಕೊಳ್ಳುವ ಮೂಲಕ ಡಿಜಿಟಲ್ ಅಭಿಯಾನವನ್ನೇ ನಡೆಸಲಾಗುತ್ತಿದೆ.

ಒಟ್ಟಾರೆಯಾಗಿ, ಜೈಲಿನಲ್ಲಿರುವ ದರ್ಶನ್ ಅವರಿಗೆ ಕಾನೂನಿನ ಚೌಕಟ್ಟಿನಲ್ಲಿ ಹಿನ್ನಡೆಯಾಗುತ್ತಿದ್ರೆ, ಹೊರಗಡೆ ಅಭಿಮಾನಿಗಳು ಪ್ರಾರ್ಥನೆ, ಮಾನವೀಯ ಮನವಿಗಳು ಹಾಗೂ ಪತ್ರ ಚಳುವಳಿಯ ಮೂಲಕ ಬೆಂಬಲವಾಗಿ ನಿಂತಿದ್ದಾರೆ. ಅಂದಹಾಗೆ, ಎಲ್ಲಿ ಹೋದ್ರೂ ಸುಮ್ಮನೆ ಡಿ ಬಾಸ್..‌ ಡಿ ಬಾಸ್‌ ಎಂದು ಕೂಗಾಡ್ತಿದ್ದ ಅಭಿಮಾನಿಗಳಿಗೆ ಈ ಬದಲು ಸಿಎಂಗೆ ಪತ್ರ ಬರೆಯಿರಿ ಎಂದು ಐಡಿಯಾ ಕೊಟ್ಟಿದ್ದು ಸಾಧು ಕೋಕಿಲ. ಆದರೆ ಡಿ ಬಾಸ್‌ ಅಭಿಮಾನಿಗಳು ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಕಾವ್ಯ ಕೃಷ್ಣಮೂರ್ತಿ

ಲೇಖಕರ ಬಗ್ಗೆಕಾವ್ಯ ಕೃಷ್ಣಮೂರ್ತಿಲೇಖಕರ ಪರಿಚಯ : ಮಾಧ್ಯಮ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಯುವ ಪತ್ರಕರ್ತೆ ಕಾವ್ಯ ಕೃಷ್ಣಮೂರ್ತಿ ಅವರು, ಪ್ರಸ್ತುತ ‘ವಿಜಯ ಕರ್ನಾಟಕ’ ಡಿಜಿಟಲ್ ವಿಭಾಗದಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿರುವ ಇವರು, ಮನರಂಜನೆ, ಅಪರಾಧ, ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳ ವರದಿಗಾರಿಕೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ.

ವೃತ್ತಿಜೀವನದ ಆರಂಭ ಮತ್ತು ಕಲಿಕೆ : ಮೂಲತಃ ಡಿಪ್ಲೋಮಾ ಓದಿರುವ ಕಾವ್ಯ ಅವರು, 2019ರಲ್ಲಿ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟರು. ಪತ್ರಿಕೋದ್ಯಮದ ಯಾವುದೇ ಶೈಕ್ಷಣಿಕ ಹಿನ್ನೆಲೆ ಅಥವಾ ಪೂರ್ವಾನುಭವ ಇಲ್ಲದಿದ್ದರೂ, ಕೇವಲ ಆಸಕ್ತಿ ಮತ್ತು ಕಲಿಯುವ ಛಲದೊಂದಿಗೆ ‘ಸ್ಪೀಡ್ ನ್ಯೂಸ್ ಕನ್ನಡ’ ಕೇಬಲ್ ಚಾನೆಲ್ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಆರಂಭದಲ್ಲಿ ಡೆಸ್ಕ್‌ನಲ್ಲಿ ಕಾಪಿ ಎಡಿಟಿಂಗ್ ಜವಾಬ್ದಾರಿಯನ್ನು ನಿರ್ವಹಿಸಿದ ಅವರು, ಹಂತ ಹಂತವಾಗಿ ವರದಿಗಾರಿಕೆಯ ಕೌಶಲ್ಯಗಳನ್ನು ರೂಢಿಸಿಕೊಂಡರು. ನಂತರ ಫಿಲ್ಮ್ ರಿಪೋರ್ಟರ್ ಮತ್ತು ಆಂಕರ್ ಆಗಿ ಬಡ್ತಿ ಪಡೆದರು. ಸುಮಾರು ಒಂದು ವರ್ಷ ಕಾಲ ಇಲ್ಲಿ ಸೇವೆ ಸಲ್ಲಿಸುವ ಮೂಲಕ ಮಾಧ್ಯಮದ ಅಕ್ಷರಮಾಲೆಯನ್ನು ಕಲಿತರು.

ಡಿಜಿಟಲ್ ಮಾಧ್ಯಮದಲ್ಲಿ ಸಂಚಲನ : ನಂತರದ ದಿನಗಳಲ್ಲಿ ‘ನ್ಯಾಷನಲ್ ಟಿವಿ’ ಯೂಟ್ಯೂಬ್ ಚಾನೆಲ್‌ಗೆ ಸೇರ್ಪಡೆಗೊಂಡ ಕಾವ್ಯ, ಅಲ್ಲಿ ಡಿಜಿಟಲ್ ಮೀಡಿಯಾದ ನಿಜವಾದ ತಾಕತ್ತನ್ನು ಪ್ರದರ್ಶಿಸಿದರು. ವಿಶೇಷವಾಗಿ ಅವರು ಮಾಡಿದ ‘ಗಿಲ್ಲಿ’ ನಟನ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆಗುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತು. ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲದೆ, ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಮತ್ತು ಸ್ಟಾರ್‌ಗಳನ್ನು ಸಂದರ್ಶಿಸುವ ಟ್ರೆಂಡ್ ಹುಟ್ಟುಹಾಕಿದರು. ಕರ್ನಾಟಕದ ಅತ್ಯಂತ ಜನಪ್ರಿಯ ಯೂಟ್ಯೂಬರ್ ‘ಡಾ ಬ್ರೋ’ ಅವರನ್ನು ಸಂದರ್ಶಿಸಿದ ಮೊದಲ ನಿರೂಪಕಿ ಎಂಬ ಹೆಗ್ಗಳಿಕೆ ಕಾವ್ಯ ಕೃಷ್ಣಮೂರ್ತಿ ಅವರದ್ದು. ಇವರ ಈ ಸಂದರ್ಶನಗಳು ಇಂದಿಗೂ ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಟ್ರೆಂಡಿಂಗ್‌ನಲ್ಲಿವೆ.

ಬಹುಮುಖ ಪ್ರತಿಭೆ ಮತ್ತು ಅನುಭವ : ತದನಂತರ ‘ದಿಗ್ವಿಜಯ ನ್ಯೂಸ್’ ವಾಹಿನಿಗೆ ಸೇರ್ಪಡೆಗೊಂಡ ಅವರು, ಅಲ್ಲಿ ‘ಸಿನಿಸ್ಟಾರ್’ ಕಾರ್ಯಕ್ರಮದ ನಿರೂಪಕಿಯಾಗಿ ಜನಮನ ಗೆದ್ದರು. ಕೇವಲ ಸಿನಿಮಾಕ್ಕೆ ಸೀಮಿತವಾಗದೆ ಕ್ರೈಮ್, ಮೆಟ್ರೋ ಸುದ್ದಿ ಮತ್ತು ರಾಜಕೀಯ ಕಾರ್ಯಕ್ರಮಗಳನ್ನೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿದರು. ದಿನಕ್ಕೆ ಹತ್ತಾರು ಕಾರ್ಯಕ್ರಮಗಳನ್ನು ನಿರೂಪಣೆ ಮಾಡುವ ಮೂಲಕ ಟೆಲಿವಿಷನ್ ಮಾಧ್ಯಮದಲ್ಲೂ ತಮ್ಮ ಛಾಪು ಮೂಡಿಸಿದರು.

ಮುಂದುವರಿದು ‘ರಿಪಬ್ಲಿಕ್ ಕನ್ನಡ’ ವಾಹಿನಿಯಲ್ಲಿ ಫಿಲ್ಮ್ ರಿಪೋರ್ಟರ್ ಆಗಿ ಮತ್ತು ‘ಕನ್ನಡ ಪಿಕ್ಚರ್’ ಯೂಟ್ಯೂಬ್ ಚಾನೆಲ್‌ನಲ್ಲಿ ನಿರೂಪಕಿ ಹಾಗೂ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಶೂನ್ಯದಿಂದ ಆರಂಭಿಸಿ, ಇಂದು ಪ್ರಮುಖ ಮಾಧ್ಯಮ ಸಂಸ್ಥೆ ವಿಜಯ ಕರ್ನಾಟಕ ಡಿಜಿಟಲ್ ನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿ ನಿಲ್ಲುವವರೆಗಿನ ಇವರ ನಾಲ್ಕು ವರ್ಷಗಳ ಪಯಣ ಸ್ಫೂರ್ತಿದಾಯಕವಾಗಿದೆ.

ಕ್ರೀಡಾ ಕ್ಷೇತ್ರದಲ್ಲಿಯೂ ಎತ್ತಿದ ಕೈ : ಕೇವಲ ಪೆನ್ನು, ಮೈಕ್ ಮತ್ತು ಕ್ಯಾಮೆರಾಕ್ಕೆ ಸೀಮಿತವಾಗದೆ ಕ್ರೀಡಾಂಗಣದಲ್ಲೂ ಕಾವ್ಯ ಕೃಷ್ಣಮೂರ್ತಿ ಅವರು ಮಿಂಚಿದ್ದಾರೆ. ಪತ್ರಕರ್ತರ ಮತ್ತು ಸೆಲೆಬ್ರಿಟಿಗಳ ಕ್ರೀಡಾ ಕೂಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇವರು, ಸ್ಯಾಂಡಲ್ವುಡ್ ಕಪ್-2024, ಸೆಲೆಬ್ರಿಟಿ ವುಮೆನ್ಸ್ ಕಬ್ಬಡಿ ಲೀಗ್ (CWKL-2025), ವುಮೆನ್ಸ್ ಥ್ರೋ ಬಾಲ್ ಮತ್ತು ಕ್ರಿಕೆಟ್ ಉತ್ಸವ (WTC-2025) ಹಾಗೂ ಸಿನಿಮಾ ಪತ್ರಕರ್ತರ ಕ್ರಿಕೆಟ್ ಟೂರ್ನಿ (ಸಿಪಕ್ರಿ-SIPACRI 2025) ಗಳಲ್ಲಿ ಆಟಗಾರ್ತಿಯಾಗಿ ಭಾಗವಹಿಸಿ ತಮ್ಮ ಕ್ರೀಡಾಸ್ಫೂರ್ತಿಯನ್ನು ಮೆರೆದಿದ್ದಾರೆ.

ವಿಶೇಷ ಕಾರ್ಯಕ್ರಮಗಳ ನಿರ್ವಹಣೆ : ವಿಜಯ ಕರ್ನಾಟಕ ಡಿಜಿಟಲ್ ಆಯೋಜಿಸಿದ ‘ಶಕ್ತಿ ಸಂವಾದ – 2026’ ಕಾರ್ಯಕ್ರಮದಲ್ಲಿ ಕಾವ್ಯ ಕೃಷ್ಣಮೂರ್ತಿ ಅವರ ಕಾರ್ಯಕ್ಷಮತೆ ಎದ್ದು ಕಂಡಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮದ ಆಯೋಜನಾ ತಂಡದ ಪ್ರಮುಖರಲ್ಲಿ ಒಬ್ಬರು. ಕೇವಲ ತೆರೆಯ ಹಿಂದಷ್ಟೇ ಅಲ್ಲದೆ, ವೇದಿಕೆಯ ಮೇಲೂ ತಮ್ಮ ಕೌಶಲ್ಯ ಪ್ರದರ್ಶಿಸಿದ ಕಾವ್ಯ, ಜನಪ್ರಿಯ ಇನ್ಫ್ಲುಯೆನ್ಸರ್ ಸುಷ್ಮಿತಾ ಶೇಷಗಿರಿ ಅವರೊಂದಿಗೆ ನಡೆಸಿದ ಸ್ವಾರಸ್ಯಕರ ಸಂವಾದ ಮತ್ತು ಅಚ್ಚುಕಟ್ಟಾದ ನಿರೂಪಣೆ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.

ಪ್ರಸ್ತುತ ವಿಜಯ ಕರ್ನಾಟಕ ಡಿಜಿಟಲ್ ತಂಡದಲ್ಲಿರುವ ಕಾವ್ಯ, ಓದುಗರಿಗೆ ತಾಜಾ ಮತ್ತು ಗುಣಮಟ್ಟದ ಮನರಂಜನಾ ಸುದ್ದಿಗಳನ್ನು ತಲುಪಿಸುವಲ್ಲಿ ನಿರತರಾಗಿದ್ದಾರೆ.… ಇನ್ನಷ್ಟು ಓದಿ