ಬೆಂಗಳೂರು: ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಯೋಜನೆ ಆಯೋಗದ ಉಪಾಧ್ಯಕ್ಷ ಹಾಗೂ ಆಳಂದ ಶಾಸಕ ಬಿಆರ್ ಪಾಟೀಲ್ ಪತ್ರ ಬರೆದಿದ್ದು, ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. 2020ರಲ್ಲಿ ಹಿಂದಿನ ಬಿಜೆಪಿ ಸರ್ಕಾರ ರದ್ದುಪಡಿಸಿದ್ದ ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79A, 79B ಮತ್ತು 79C ಅನ್ನು ಮರುಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.
ಸೆಪ್ಟೆಂಬರ್ 29ರಂದು ರಾಹುಲ್ ಗಾಂಧಿ ಅವರಿಗೆ ಇ-ಮೇಲ್ ಮತ್ತು ನೋಂದಾಯಿತ ಅಂಚೆ ಮೂಲಕ ಕಳುಹಿಸಿದ ಪತ್ರದಲ್ಲಿ, ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ “ರೈತ ವಿರೋಧಿ ಕಾನೂನುಗಳನ್ನು” ರದ್ದುಪಡಿಸಿ, ಭೂ ಸುಧಾರಣಾ ಕಾಯ್ದೆಯಡಿ ಇದ್ದ ರಕ್ಷಣಾತ್ಮಕ ಕ್ರಮಗಳನ್ನು ಮರುಸ್ಥಾಪಿಸುವುದಾಗಿ ಕಾಂಗ್ರೆಸ್ ತನ್ನ 2023ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು ಎಂದು ಪಾಟೀಲ್ ನೆನಪಿಸಿದ್ದಾರೆ.
ಆ ಮೂರು ನಿಬಂಧನೆಗಳನ್ನು ಮರುಸ್ಥಾಪಿಸುವ ಯಾವುದೇ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ ಎಂದು ರಾಜ್ಯ ಕಂದಾಯ ಇಲಾಖೆಯು ಇತ್ತೀಚೆಗೆ ವಿಧಾನಸಭೆಯಲ್ಲಿ ಅಧಿಕೃತವಾಗಿ ತಿಳಿಸಿದೆ ಎಂದು ಪಾಟೀಲ್ ಹೇಳಿದ್ದಾರೆ.
ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಕೃಷಿ ಭೂಮಿ ವರ್ಗಾವಣೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, 2021 ಮತ್ತು ಆಗಸ್ಟ್ 2026ರ ನಡುವೆ ಕರ್ನಾಟಕದಲ್ಲಿ ಸುಮಾರು 19.92 ಲಕ್ಷ ಎಕರೆ ಕೃಷಿ ಭೂಮಿ ಮಾರಾಟ ಮತ್ತು ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.













Leave a Reply