ಬೆಂಗಳೂರು ‘ತ್ಯಾಜ್ಯ ಮುಕ್ತ ಅಭಿಯಾನ’: ಖಾಲಿ ನಿವೇಶನಗಳ ಕಸ ವಿಲೇವಾರಿ ಗಡುವು ವಿಸ್ತರಣೆ, ಆ.22ರೊಳಗೆ ಸೈಟ್ ಕ್ಲೀನ್ ಮಾಡದಿದ್ದರೆ ಬೀಳುತ್ತೆ ಭಾರಿ ದಂಡ..!


ಬೆಂಗಳೂರು: ರಾಜಧಾನಿಯ ಖಾಲಿ ನಿವೇಶನಗಳ ಮಾಲೀಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಬಿಗ್ ರಿಲೀಫ್ ನೀಡಿದ್ದು, ಪ್ಲಾಟ್‌ಗಳಲ್ಲಿರುವ ಕಸ ಮತ್ತು ಗಿಡಗಂಟೆಗಳನ್ನು ತೆರವುಗೊಳಿಸಲು ನೀಡಿದ್ದ ಗಡುವನ್ನು ಆಗಸ್ಟ್ 22, 2026ರವರೆಗೆ ವಿಸ್ತರಿಸಿದೆ.

ಖಾಲಿ ನಿವೇಶನಗಳಲ್ಲಿ ಕಸ ಹಾಗೂ ನಿರ್ಮಾಣ ತ್ಯಾಜ್ಯ ತೆರವುಗೊಳಿಸಲು ಗುತ್ತಿಗೆದಾರರು ಸಿಗುತ್ತಿಲ್ಲ. ಹೀಗಾಗಿ ಇನ್ನಷ್ಟು ದಿನಗಳ ಕಾಲಾವಕಾಶ ನೀಡುವಂತೆ ನಿವೇಶನ ಮಾಲೀಕರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ GBA ಗಡುವು ವಿಸ್ತರಿಸಿ, ಅಧಿಸೂಚನೆ ಹೊರಡಿಸಿದೆ.

ಹೆಚ್ಚುವರಿ ಸಮಯವನ್ನು ಬಳಸಿಕೊಂಡು ನಗರದಾದ್ಯಂತ ತಮ್ಮ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಎಲ್ಲ ಆಸ್ತಿ ಮಾಲೀಕರಿಗೆ ಮನವಿ ಮಾಡುತ್ತೇವೆ. ಸಾರ್ವಜನಿಕ ಸ್ಥಳಗಳಲ್ಲಿನ ತ್ಯಾಜ್ಯ ತೆರವು ನಮ್ಮೆಲ್ಲರ ಜವಾಬ್ದಾರಿ. ಖಾಸಗಿ ಆಸ್ತಿಯ ನಿರ್ವಹಣೆ ಅದರ ಮಾಲೀಕರ ಜವಾಬ್ದಾರಿ. ಎಲ್ಲರೂ ಕೈಜೋಡಿಸಿದಾಗ ಮಾತ್ರ ಬೆಂಗಳೂರು ಮತ್ತಷ್ಟು ಉತ್ತಮ ನಗರವಾಗಲಿದೆ” ಎಂದು GBA ಪ್ರಕಟಣೆಯಲ್ಲಿ ತಿಳಿಸಿದೆ.

ಖಾಲಿ ನಿವೇಶನಗಳ ಸ್ವಚ್ಛತೆಗೆ ವಿಧಿಸಲಾಗುತ್ತಿರುವ ಶುಲ್ಕ ದುಬಾರಿಯಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ GBA, ದರಗಳನ್ನು ಏಕಪಕ್ಷೀಯವಾಗಿ ನಿಗದಿಪಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿವಿಧ ಕಾಮಗಾರಿಗಳಿಗೆ ಸರ್ಕಾರ ನಿಗದಿಪಡಿಸಿರುವ ಷೆಡ್ಯೂಲ್ ಆಫ್ ರೇಟ್ಸ್ (SR) ಆಧಾರದ ಮೇಲೆ ದರ ನಿಗದಿಪಡಿಸಲಾಗಿದೆ. ನಿವೇಶನದ ವಿಸ್ತೀರ್ಣ, ತೆರವುಗೊಳಿಸಬೇಕಾದ ತ್ಯಾಜ್ಯದ ಪ್ರಮಾಣ ಹಾಗೂ ಇತರ ಕಾಮಗಾರಿಗಳ ಆಧಾರದ ಮೇಲೆ ವೆಚ್ಚ ಲೆಕ್ಕ ಹಾಕಲಾಗುತ್ತದೆ. ತ್ಯಾಜ್ಯ ಸಾಗಣೆ ವೆಚ್ಚವನ್ನೂ ಇದರಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದೆ.

GBA, BDA, BESCOM, KRIDE, BMRCL ಹಾಗೂ KIADB ಸಹಯೋಗದಲ್ಲಿ ‘ಫ್ರೀಡಂ ಫ್ರಂ ವೇಸ್ಟ್’ ಅಭಿಯಾನವನ್ನು ತೀವ್ರಗೊಳಿಸಲಾಗಿದ್ದು, ನಗರದ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಅಭಿಯಾನದಡಿ ಅಕ್ರಮವಾಗಿ ಸುರಿಯಲಾಗಿರುವ ನಿರ್ಮಾಣ ತ್ಯಾಜ್ಯ, ಬೆಳೆದಿರುವ ಕಳೆ ಹಾಗೂ ಇತರ ತ್ಯಾಜ್ಯ ತೆರವುಗೊಳಿಸಲು ನಗರದಾದ್ಯಂತ 100 ಟ್ರಕ್‌ಗಳು ಮತ್ತು 25 ಅಗೆಯುವ ಯಂತ್ರಗಳನ್ನು ನಿಯೋಜಿಸಲಾಗಿದೆ.

ಇದುವರೆಗೆ 30,000 ಟನ್‌ಗೂ ಅಧಿಕ ನಿರ್ಮಾಣ ತ್ಯಾಜ್ಯ ಹಾಗೂ ಬೆಳೆದಿರುವ ಸಸ್ಯವರ್ಗವನ್ನು ತೆರವುಗೊಳಿಸಲಾಗಿದೆ ಎಂದು GBA ತಿಳಿಸಿದೆ.



Source link

Leave a Comment