ಸುದೀರ್ಘ ಉಕ್ರೇನ್‌ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೊಂದಿಗೆ ಮಾತುಕತೆ ನಡೆಸಲು, ಅಮೆರಿಕದ ಇಬ್ಬರು ಪ್ರತಿನಿಧಿಗಳ ನಿಯೋಗ ಮಾಸ್ಕೋ ತಲುಪಿದೆ. ಪುಟಿನ್‌ ಈಗಾಗಲೇ ಸ್ಟೀವ್‌ ವಿಟ್ಕಾಫ ಮತ್ತು ಜೇರೆಡ್‌ ಕುಶ್ನರ್‌ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯುದ್ಧದ ಪರಿಸ್ಥಿತಿಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಕದನ ವಿರಾಮದ ಕುರಿತು ಮಾಸ್ಕೋ ಯಾವುದೇ ಭರವಸೆ ನೀಡಿಲ್ಲವಾದರೂ, ಈ ದಿಸೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ ಎಂದು ಮೂಲಗಳು ಖಚಿತಪಡಿಸಿವೆ.

ಹೈಲೈಟ್ಸ್‌:

  • ವ್ಲಾಡಿಮಿರ್‌ ಪುಟಿನ್‌ ಜೊತೆ ಅಮೆರಿಕದ ಪ್ರತಿನಿಧಿಗಳ ಮಾತುಕತೆ.
  • ಉಕ್ರೇನ್‌ ಯುದ್ಧ ಕೊನೆಗೊಳಿಸಲು ಒಪ್ಪುತ್ತಾರಾ ರಷ್ಯಾ ಅಧ್ಯಕ್ಷ?
  • ಸ್ಟೀವ್‌ ವಿಟ್ಕಾಫ್‌, ಜೇರೆಡ್‌ ಕುಶ್ನರ್‌ ಮಾಸ್ಕೋಗೆ ಮಹತ್ವದ ಭೇಟಿ.
Putin Talks With US Envoys
ಯುಎಸ್‌ ಪ್ರತಿನಿಧಿಗಳೊಂದಿದಿಗೆ ಪುಟಿನ್‌ ಸಂವಾದ(ಗ್ಯಾಲರಿAP)
ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಕ್ರೆಮ್ಲಿನ್‌ನಲ್ಲಿ ಅಮೆರಿಕದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದು, ಉಕ್ರೇನ್‌ನಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದ ಯುದ್ಧವನ್ನು ಕೊನೆಗೊಳಿಸುವ ವಿಚಾರದಲ್ಲಿ ಹೊಸ ಆಶಾಭಾವನೆ ಮೂಡಿದೆ. ರಷ್ಯಾ-ಉಕ್ರೇನ್‌ ಕದನ ವಿರಾಮ ಒಪ್ಪಂದ ಜಾರಿಗಾಗಿ, ಅಮೆರಿಕದ ಇಬ್ಬರು ಪ್ರತಿನಿಧಿಗಳಾದ ಸ್ಟೀವ್‌ ವಿಟ್ಕಾಫ್‌ ಮತ್ತು ಜೇರೆಡ್‌ ಕುಶ್ನೆರ್‌ ಅವರು ಮಾಸ್ಕೋಗೆ ಬಂದಿಳಿದಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಯುರೋಪ್‌ನ ಕೆಟ್ಟ ಸಂಘರ್ಷವನ್ನು ಕೊನೆಗೊಳಿಸಲು, ವಾಷಿಂಗ್ಟನ್‌ ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಮಾತುಕತೆಯ ಸಮಯದಲ್ಲಿ ರಷ್ಯಾ ಮತ್ತು ಉಕ್ರೇನ್ ಮೂರು ದಿನಗಳವರೆಗೆ ಪರಸ್ಪರರ ರಾಜಧಾನಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲಎಂದು ಪ್ರತಿಜ್ಞೆ ಮಾಡಿವೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ತಮ್ಮ ಅಳಿಯ ಜೆರೇಡ್‌ ಕುಶ್ನೆರ್ ಮತ್ತು ವ್ಯಾಪಾರ ಮಿತ್ರ‌ ಸ್ಟೀವ್‌ ವಿಟ್ಕಾಫ್ ಅವರನ್ನು, ಹಲವು ಬಾರಿ ಮಾಸ್ಕೋಗೆ ಶಾಂತಿ ಮಾತುಕತೆಗಳಿಗಾಗಿ ಕಳುಹಿಸಿದ್ದರು. ಆದರೆ ಇವರಿಬ್ಬರೂ ಇದೇ ಮೊದಲ ಬಾರಿಗೆ ಉಕ್ರೇನ್‌ ರಾಜಧಾನಿ ಕೈವ್‌ಗೂ ಭೇಟಿ ನೀಡಲಿದ್ದಾರೆ.

“ಆತ್ಮೀಯ ಸಹೋದ್ಯೋಗಿಗಳೇ, ನಾನು ನಿಮ್ಮನ್ನು ಮಾಸ್ಕೋಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಲ್ಲಿನ ಪರಿಸ್ಥಿತಿ ಸರಳವಾಗಿಲ್ಲ .ಆದಾಗ್ಯೂ, ಈ ಮಾತುಕತೆಗಳಿಗೆ ಚಾಲನೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ವ್ಲಾಡಿಮಿರ್‌ ಪಟಿನ್‌ ಅವರು, ಕ್ರೆಮ್ಲಿನ್ ಸಭಾಂಗಣದಲ್ಲಿ ಅಮೆರಿಕದ ರಾಯಭಾರಿಗಳಿಗೆ ನೇರವಾಗಿ ಹೇಳಿದ್ದಾರೆ.

ಪರಸ್ಪರ ಗುರಿ:

ಸುದೀರ್ಘ ಅವಧಿಯಿಂದ ಯುದ್ಧದಲ್ಲಿ ನಿರತವಾಗಿರುವ ರಷ್ಯಾ ಮತ್ತುಉಕ್ರೇನ್‌, ಪರಸ್ಪರರನ್ನು ನಾಶಮಾಡುವ ಗುರಿ ಹೊಂದಿವೆ. ಈ ಯುದ್ಧದಲ್ಲಿ ಈಗಾಗಲೇ ಅಪಾರ ಸಾವು-ನೋವು ಸಂಭವಿಸಿದ್ದು, ಜಾಗತಿಕ ಆರ್ಥಿಕತೆ ಮೇಲೂ ಗಂಭೀರ ಪರಿಣಾಮಗಳನ್ನು ಬೀರಿದೆ. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಳಿಸಲು ಅಮೆರಿಕ ಸತತ ಪ್ರಯತ್ನ ನಡೆಸುತ್ತಿದೆ.
ಇತ್ತೀಚಿಗೆ ಉಕ್ರೇನ್‌ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ನಾಗರಿಕನ ಸಾವು ಸಂಭವಿಸಿತ್ತು. ಉಕ್ರೇನ್‌ ಕೂಡ ರಷ್ಯಾದ ಪ್ರಮುಖ ತೈಲ ಸಂಸ್ಕರಣಾ ಘಟಕಗಳ ಮೇಲೆ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದೆ. 2022ರಲ್ಲಿ ರಷ್ಯಾ ಪ್ರಾರಂಭಿಸಿದ ಯುದ್ಧವು, ಸಾವಿರಾರು ಜನರ ಸಾವಿಗೆ ಮತ್ತು ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.

ನೇತೃತ್ವವಹಿಸಲು ಭಾರತ ಸಿದ್ಧ:

ಈ ಮಧ್ಯೆ ಭಾರತದ ವಿದೇಶಾಂಗ ಸಚಿವ ಡಾ.ಎಸ್‌. ಜೈಶಂಕರ್‌ ಉಕ್ರೇನ್‌ ಪ್ರವಾಸ ಹಮ್ಮಿಕೊಂಡಿದ್ದು, ರಷ್ಯಾ-ಉಕ್ರೇನ್‌ ನಡುವೆ ಶಾಂತಿ ಮಾತುಕತೆಗಳ ನೇತೃತ್ವವನ್ನು ಭಾರತ ವಹಿಸಿಕೊಳ್ಳಲಕು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ. “ಇದು ಯುದ್ಧದ ಸಮಯವಲ್ಲ” ಎಂಬ ಭಾರತದ ಸಂದೇಶವನ್ನು ಮಾಸ್ಕೋ ಮತ್ತು ಕೈವ್‌ ಅರ್ಥಮಾಡಿಕೊಂಡರೆ, ಜಾಗತಿಕ ಶಾಂತಿ ಸ್ಥಾಪನೆಗೆ ಅವಕಾಶ ದೊರೆಯಲಿದೆ.

ರಷ್ಯಾದಲ್ಲಿ ಸಿಗ್ತಿಲ್ಲ ಪೆಟ್ರೋಲ್! ಭಾರತದಿಂದ ಇಂಪೋರ್ಟ್ ಮಾಡಿಕೊಳ್ಳುತ್ತಿದೆ ಕಚ್ಚಾ ತೈಲದ ಕಿಂಗ್! ಏನಿದು ಅಚ್ಚರಿ?

ಸದ್ಯ ಸ್ಟೀವ್‌ ವಿಟ್ಕಾಫ್‌ ಮತ್ತು ಜೇರೆಡ್‌ ಕುಶ್ನೆರ್‌ ಅವರೊಂದಿಗಿನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರ ಮಾತುಕತೆಗಳ ಮೇಲೆ, ಇಡೀ ಜಗತ್ತು ದೃಷ್ಟಿ ನೆಟ್ಟಿದೆ ಎಂದು ಹೇಳಬಹುದು.

ನಿಖಿಲ್‌ ಕುಲಕರ್ಣಿ

ಲೇಖಕರ ಬಗ್ಗೆನಿಖಿಲ್‌ ಕುಲಕರ್ಣಿವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಸಿನಿಯರ್‌ ಡಿಜಿಟಲ್‌ ಕಂಟೆಂಟ್‌ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸುತ್ತಿರುವ ಇವರು, ಪ್ರಸ್ತುತ ವಿಕ ಡಿಜಿಟಲ್‌ ವಿಭಾಗದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿ ವಿಭಾಗದ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ. ದೇಶ-ವಿದೇಶಗಳ ವಿದ್ಯಮಾನಗಳನ್ನು ಕನ್ನಡಿಗರಿಗೆ ತಲುಪಿಸುವಲ್ಲಿ ನಿರತವಾಗಿರುವ ಇವರು, ಈ ವಿಭಾಗದಲ್ಲಿ ಓದುಗರಿಗೆ ಉಪಯುಕ್ತವಾಗುವ ಅನೇಕ ಲೇಖನಗಳು ಮತ್ತು ವಿಶೇಷ ವರದಿಗಳನ್ನು ಹಾಗೂ ವಿಡಿಯೋಗಳನ್ನು ನಿರ್ಮಾಣ ಮಾಡಿದ್ದಾರೆ. ವಿಜಯ ಕರ್ನಾಟಕ ಡಿಜಿಟಲ್‌ನಲ್ಲಿ ದೇಶ, ವಿದೇಶ ಮತ್ತು ವಾಣಿಜ್ಯ ಕ್ಷೇತ್ರದ ಪ್ರಮುಖ ಬೆಳವಣಿಗೆಗಳ ಮೇಲೆ ನಡೆದ ಹಲವು ಪಾಡ್‌ಕಾಸ್ಟ್‌ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ.ದೇಶ-ವಿದೇಶಗಳ ವಿದ್ಯಮಾನದ ಜೊತೆಗೆ ರಾಷ್ಟ್ರ ಮತ್ತು ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದ ರಾಜಕೀಯ ವಿಶ್ಲೇಷಣೆ, ರಾಜಕೀಯ ವಿದ್ಯಮಾನಗಳು, ಚುನಾವಣಾ ಪ್ರಕ್ರಿಯೆಗಳ ಬಗ್ಗೆಯೂ ನಿಖಿಲ್‌ ಕುಲಕರ್ಣಿ ಲೇಖನಗಳನ್ನು ಪ್ರಕಟಿಸುತ್ತಾರೆ. ದೇಶ-ವಿದೇಶ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಿಗೆ ಸಂಬಂಧಿಸಿದ ವಿಜಯ ಕರ್ನಾಟಕ ವೆಬ್‌ನ ಸುದೀರ್ಘ ವಿಶ್ಲೇಷಣಾತ್ಮಕ ಲೇಖನಕ್ಕೆ ಸಂಬಂಧಿಸಿದ ಆ್ಯಪ್‌ ಎಕ್ಸ್‌ಕ್ಲೂಸಿವ್ ವಿಭಾಗಕ್ಕೂ ನಿರಂತರವಾಗಿ ಲೇಖನಗಳನ್ನು ಪ್ರಕಟಿಸುತ್ತಾರೆ. ವೃತ್ತಿ ಅನುಭವ: ಕನ್ನಡ ಮಾಧ್ಯಮ ಲೋಕದಲ್ಲಿ ಸುಮಾರು 12 ವರ್ಷಗಳ ವೃತ್ತಿ ಅನುಭವವಿದೆ. ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗ ಸೇರುವ ಮೊದಲು ಇವರು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ, ಏಷ್ಯಾನೆಟ್‌ ನ್ಯೂಸ್‌ ಕನ್ನಡ, ಈಟಿವಿ ಭಾರತ್‌ ಮತ್ತು ಸುವರ್ಣನ್ಯೂಸ್‌ 24×7 ಚಾನೆಲ್‌ನಲ್ಲಿ ಕೆಲಸ ಮಾಡಿದ್ದಾರೆ.ಪರಿಣಿತಿ: ಜಾಗತಿಕ ಖಗೋಳ ಕ್ಷೇತ್ರದ ಆಗು-ಹೋಗುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದು, ಬಾಹ್ಯಾಕಾಶ ಸಂಶೋಧನೆಗಳ ಕುರಿತು ಅನೇಕ ಲೇಖನಗಳನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಭಾರತದ ಬಾಹ್ಯಾಕಾಶ ನಾಗಾಲೋಟದ ಕುರಿತು, ಆಸಕ್ತ ಕನ್ನಡಿಗರಿಗೆ ಸಕಾಲಕ್ಕೆ ಮಾಹಿತಿ ತಲುಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ತಜ್ಞರೊಂದಿಗೆ ವಿಶೇಷ ಸಂವಾದ, ಸಂದರ್ಶನ ಮತ್ತು ಪಾಡ್‌ಕಾಸ್ಟ್‌ಗಳಲ್ಲಿ ಭಾಗಿಯಾಗಿದ್ದಾರೆ. ಪ್ರಸ್ತುತ ವಿಜಯ ಕರ್ನಾಟಕ ವೆಬ್‌ನಲ್ಲಿ “ವಿಶ್ವ ಕಣ್ಣೋಟ” ಎಂಬ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದ ಸರಣಿ ಲೇಖನವನ್ನು ಪ್ರಕಟಿಸುತ್ತಿದ್ದಾರೆ.ಶಿಕ್ಷಣ: 2007ರಲ್ಲಿ ಕರ್ನಾಟಕ ಕಾಲೇಜು ಧಾರವಾಡದಿಂದ ಪದವಿ ಮತ್ತು 2010ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಅನೇಕ ಸ್ಪರ್ಧೆ, ಸಂವಾದ ಮತ್ತು ಮಾಧ್ಯಮ ಹಬ್ಬಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾರೆ.ಹವ್ಯಾಸ: ಬಾಹ್ಯಾಕಾಶ ವೀಕ್ಷಣೆ ನೆಚ್ಚಿನ ಹವ್ಯಾಸಗಳಲ್ಲಿ ಒಂದಾಗಿದ್ದು, ಖಗೋಳಿಯ ವಿದ್ಯಮಾನಗಳನ್ನು ದಾಖಲಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದ ವಿಜ್ಞಾನ ಕೇಂದ್ರಗಳು ಹಮ್ಮಿಕೊಳ್ಳುವ ಸಂವಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.ವ್ಯಾಪ್ತಿ ವಿಶೇಷತೆ: ವಿಜಯ ಕರ್ನಾಟಕ ಡಿಜಿಟಲ್‌ ವಿಭಾಗದಲ್ಲಿ ಕಳೆದ ವರ್ಷಗಳಲ್ಲಿ ಇವರು ಅನೇಕ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಿದ್ಯಮಾನಗಳ ಕುರಿತು ಲೇಖನಗಳನ್ನು ಪ್ರಕಟಿಸಿದ್ದಾರೆ. ಚುನಾವಣೆಗಳು, ದ್ವಿಪಕ್ಷೀಯ ರಾಜತಾಂತ್ರಿಕ ಮತ್ತು ವಾಣಿಜ್ಯ ಸಂಬಂಧಗಳು, ರಕ್ಷಣಾ ಕ್ಷೇತ್ರದ ವಿದ್ಯಮಾನಗಳು, ನಾಸಾ, ಇಸ್ರೋದಂತಹ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಕೈಗೊಂಡ ಕಾರ್ಯಾಚರಣೆಗಳು, ಬಾಹ್ಯಾಕಾಶದಲ್ಲಿ ನಡೆದ ಹೊಸ ಆವಿಷ್ಕಾರಗಳು ಹೀಗೆ ಅನೇಕ ವಿಷಯಗಳ ಬಗ್ಗೆ ಓದುಗರಿಗೆ ಸಕಾಲಕ್ಕೆ ವಿಫುಲ ಮಾಹಿತಿ ನೀಡಿದ್ದಾರೆ.ನೈಪುಣ್ಯತೆ ಇರುವ ಕ್ಷೇತ್ರಗಳು: ಅಂತಾರಾಷ್ಟ್ರೀಯ ವಿದ್ಯಮಾನ, ರಾಜಕೀಯ ವಿದ್ಯಮಾನ, ವಾಣಿಜ್ಯ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಕ್ಷೇತ್ರ.ಇನ್ನಷ್ಟು ಓದಿ