ಸುದೀರ್ಘ ಉಕ್ರೇನ್ ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಲು, ಅಮೆರಿಕದ ಇಬ್ಬರು ಪ್ರತಿನಿಧಿಗಳ ನಿಯೋಗ ಮಾಸ್ಕೋ ತಲುಪಿದೆ. ಪುಟಿನ್ ಈಗಾಗಲೇ ಸ್ಟೀವ್ ವಿಟ್ಕಾಫ ಮತ್ತು ಜೇರೆಡ್ ಕುಶ್ನರ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಯುದ್ಧದ ಪರಿಸ್ಥಿತಿಗಳ ಕುರಿತು ಸಮಾಲೋಚನೆ ನಡೆಸಿದ್ದಾರೆ. ಕದನ ವಿರಾಮದ ಕುರಿತು ಮಾಸ್ಕೋ ಯಾವುದೇ ಭರವಸೆ ನೀಡಿಲ್ಲವಾದರೂ, ಈ ದಿಸೆಯಲ್ಲಿ ಸಕಾರಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ ಎಂದು ಮೂಲಗಳು ಖಚಿತಪಡಿಸಿವೆ.
ಹೈಲೈಟ್ಸ್:
- ವ್ಲಾಡಿಮಿರ್ ಪುಟಿನ್ ಜೊತೆ ಅಮೆರಿಕದ ಪ್ರತಿನಿಧಿಗಳ ಮಾತುಕತೆ.
- ಉಕ್ರೇನ್ ಯುದ್ಧ ಕೊನೆಗೊಳಿಸಲು ಒಪ್ಪುತ್ತಾರಾ ರಷ್ಯಾ ಅಧ್ಯಕ್ಷ?
- ಸ್ಟೀವ್ ವಿಟ್ಕಾಫ್, ಜೇರೆಡ್ ಕುಶ್ನರ್ ಮಾಸ್ಕೋಗೆ ಮಹತ್ವದ ಭೇಟಿ.

ಎರಡನೇ ಮಹಾಯುದ್ಧದ ನಂತರ ಯುರೋಪ್ನ ಕೆಟ್ಟ ಸಂಘರ್ಷವನ್ನು ಕೊನೆಗೊಳಿಸಲು, ವಾಷಿಂಗ್ಟನ್ ಮಾತುಕತೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದೆ. ಮಾತುಕತೆಯ ಸಮಯದಲ್ಲಿ ರಷ್ಯಾ ಮತ್ತು ಉಕ್ರೇನ್ ಮೂರು ದಿನಗಳವರೆಗೆ ಪರಸ್ಪರರ ರಾಜಧಾನಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದಿಲ್ಲಎಂದು ಪ್ರತಿಜ್ಞೆ ಮಾಡಿವೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ತಮ್ಮ ಅಳಿಯ ಜೆರೇಡ್ ಕುಶ್ನೆರ್ ಮತ್ತು ವ್ಯಾಪಾರ ಮಿತ್ರ ಸ್ಟೀವ್ ವಿಟ್ಕಾಫ್ ಅವರನ್ನು, ಹಲವು ಬಾರಿ ಮಾಸ್ಕೋಗೆ ಶಾಂತಿ ಮಾತುಕತೆಗಳಿಗಾಗಿ ಕಳುಹಿಸಿದ್ದರು. ಆದರೆ ಇವರಿಬ್ಬರೂ ಇದೇ ಮೊದಲ ಬಾರಿಗೆ ಉಕ್ರೇನ್ ರಾಜಧಾನಿ ಕೈವ್ಗೂ ಭೇಟಿ ನೀಡಲಿದ್ದಾರೆ.
“ಆತ್ಮೀಯ ಸಹೋದ್ಯೋಗಿಗಳೇ, ನಾನು ನಿಮ್ಮನ್ನು ಮಾಸ್ಕೋಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಇಲ್ಲಿನ ಪರಿಸ್ಥಿತಿ ಸರಳವಾಗಿಲ್ಲ .ಆದಾಗ್ಯೂ, ಈ ಮಾತುಕತೆಗಳಿಗೆ ಚಾಲನೆ ನೀಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನಾನು ಅಭಿನಂದಿಸುತ್ತೇನೆ” ಎಂದು ವ್ಲಾಡಿಮಿರ್ ಪಟಿನ್ ಅವರು, ಕ್ರೆಮ್ಲಿನ್ ಸಭಾಂಗಣದಲ್ಲಿ ಅಮೆರಿಕದ ರಾಯಭಾರಿಗಳಿಗೆ ನೇರವಾಗಿ ಹೇಳಿದ್ದಾರೆ.
ಪರಸ್ಪರ ಗುರಿ:
ಸುದೀರ್ಘ ಅವಧಿಯಿಂದ ಯುದ್ಧದಲ್ಲಿ ನಿರತವಾಗಿರುವ ರಷ್ಯಾ ಮತ್ತುಉಕ್ರೇನ್, ಪರಸ್ಪರರನ್ನು ನಾಶಮಾಡುವ ಗುರಿ ಹೊಂದಿವೆ. ಈ ಯುದ್ಧದಲ್ಲಿ ಈಗಾಗಲೇ ಅಪಾರ ಸಾವು-ನೋವು ಸಂಭವಿಸಿದ್ದು, ಜಾಗತಿಕ ಆರ್ಥಿಕತೆ ಮೇಲೂ ಗಂಭೀರ ಪರಿಣಾಮಗಳನ್ನು ಬೀರಿದೆ. ಎರಡೂ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಜಾರಿಗೊಳಿಸಲು ಅಮೆರಿಕ ಸತತ ಪ್ರಯತ್ನ ನಡೆಸುತ್ತಿದೆ.
ಇತ್ತೀಚಿಗೆ ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ನಾಗರಿಕನ ಸಾವು ಸಂಭವಿಸಿತ್ತು. ಉಕ್ರೇನ್ ಕೂಡ ರಷ್ಯಾದ ಪ್ರಮುಖ ತೈಲ ಸಂಸ್ಕರಣಾ ಘಟಕಗಳ ಮೇಲೆ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿದೆ. 2022ರಲ್ಲಿ ರಷ್ಯಾ ಪ್ರಾರಂಭಿಸಿದ ಯುದ್ಧವು, ಸಾವಿರಾರು ಜನರ ಸಾವಿಗೆ ಮತ್ತು ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.
ನೇತೃತ್ವವಹಿಸಲು ಭಾರತ ಸಿದ್ಧ:
ಈ ಮಧ್ಯೆ ಭಾರತದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಉಕ್ರೇನ್ ಪ್ರವಾಸ ಹಮ್ಮಿಕೊಂಡಿದ್ದು, ರಷ್ಯಾ-ಉಕ್ರೇನ್ ನಡುವೆ ಶಾಂತಿ ಮಾತುಕತೆಗಳ ನೇತೃತ್ವವನ್ನು ಭಾರತ ವಹಿಸಿಕೊಳ್ಳಲಕು ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ. “ಇದು ಯುದ್ಧದ ಸಮಯವಲ್ಲ” ಎಂಬ ಭಾರತದ ಸಂದೇಶವನ್ನು ಮಾಸ್ಕೋ ಮತ್ತು ಕೈವ್ ಅರ್ಥಮಾಡಿಕೊಂಡರೆ, ಜಾಗತಿಕ ಶಾಂತಿ ಸ್ಥಾಪನೆಗೆ ಅವಕಾಶ ದೊರೆಯಲಿದೆ.
ರಷ್ಯಾದಲ್ಲಿ ಸಿಗ್ತಿಲ್ಲ ಪೆಟ್ರೋಲ್! ಭಾರತದಿಂದ ಇಂಪೋರ್ಟ್ ಮಾಡಿಕೊಳ್ಳುತ್ತಿದೆ ಕಚ್ಚಾ ತೈಲದ ಕಿಂಗ್! ಏನಿದು ಅಚ್ಚರಿ?
ಸದ್ಯ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನೆರ್ ಅವರೊಂದಿಗಿನ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾತುಕತೆಗಳ ಮೇಲೆ, ಇಡೀ ಜಗತ್ತು ದೃಷ್ಟಿ ನೆಟ್ಟಿದೆ ಎಂದು ಹೇಳಬಹುದು.















Leave a Reply